ತೇರದಾಳದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಪಾಲಕಿ ಹಾಗೂ ನಂದಿಕೋಲು ಉತ್ಸವ, ದೇವಕನ್ಯೆಯರ ಗಾಯನ, ಝಾಂಝ ಪಥಕದ ಕುಣಿತ ವಿಜೃಂಭಣೆಯಿಂದ ಜರುಗಿತು.
ತೇರದಾಳ: ತರಕಾರಿ ಹಿಡಿದು, ದಿನಸಿ ವಸ್ತುಗಳೆಲ್ಲವೂ ಗಗನಕ್ಕೇರಿ, ಅಬ್ಬಾ ! ಪೇಟೆ ಧಾರಣೆ ಎನ್ನುತ್ತಲೇ ಈ ವರ್ಷ ದೀಪಾವಳಿ ಹಬ್ಬವನ್ನು ಸ್ವಾಗತಿಸುವ ಮೂಲಕ ಪಟ್ಟಣದ ಜನತೆ ಕಡೇಪಾಡ್ಯವರೆಗೂ ಆಚರಿಸಬೇಕಾಯಿತು.
ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ದೀಪಾವಳಿ ಪರ್ವದಲ್ಲಿ ತೇರದಾಳ ಪಟ್ಟಣದ ಜನತೆ ಮಿಂದು ನಲಿಯಿತು. ಸದ್ಭಕ್ತರ ಉಪವಾಸ, ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಪಾಲಕಿ ಮತ್ತು ನಂದಿಕೋಲುಗಳ ಉತ್ಸವ, ಅಭಿಷೇಕ, ಸಾಮೂಹಿಕ ಮಂತ್ರಪಠಣ, ನೆರವೇರಿತು.
ಶ್ರೀಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಪ್ರಾತಃಕಾಲ ಜಾಗಟೆ, ನಗಾರಿ, ತಾಳ, ಸಂಭಾಳವಾದನದೊಂದಿಗೆ ವಿಶೇಷ ಪೂಜೆ ನಡೆಯಿತು. ನಂತರ ಪಟ್ಟಣದಲ್ಲಿ ಹೂಗಳಿಂದಲಂಕೃತ ಪಾಲಕಿಯಲ್ಲಿ ಶ್ರೀಪ್ರಭು ಉತ್ಸವ, ನಂದಿಕೋಲು ಉತ್ಸವ ವಿಜೃಂಭಣೆಯಿಂದ ಜರುಗಿತು.
ವಿಜಯಮಹಾಂತ ನಾಡಗೌಡ, ಪ್ರವೀಣ ಪಿ.ನಾಡಗೌಡ ಕುಟುಂಬ ವರ್ಗದವರು, ಅರ್ಚಕರು, ಪುರಭಾಧ್ಯಕ್ಷ ಸುರೇಶ ಮುದಕನ್ನವರ(ತಳ್ಳಿ), ಶ್ರೀಅಲ್ಲಮಪ್ರಭು ಝಾಂಝ ಪಥಕದವರು, ಸಂಬಾಳ, ಕರಡಿ ಮಜಲಿನ ವಿವಿಧ ಕಲಾವಿದರು, ದೇವಕನ್ಯೆಯರು ಗಾಯನದೊಂದಿಗೆ, ವಚನಪಠಣದೊಂದಿಗೆ ಕಲಾವಿದರು, ಸದ್ಭಕ್ತರು, ಬೃಹನ್ಮಠದ ಅರ್ಚಕವೃಂದ ಉತ್ಸವದಲ್ಲಿ ಭಾಗವಹಿಸಿದ್ದರು.
ಶ್ರೀಅಲ್ಲಮಪ್ರಭುದೇವರ ದೇವಸ್ಥಾನದಿಂದ ಆರಂಭಗೊಂಡ ಪಾಲಕಿ ಉತ್ಸವ ಸಿದ್ಧೇಶ್ವರ ಗಲ್ಲಿ, ಜವಳಿ ಬಜಾರ, ಪೇಠಭಾಗ, ನಡುಚೌಕಿ, ಶ್ರೀಅಲ್ಲಮಪ್ರಭುದೇವರ ಅಗಸಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಐತಿಹಾಸಿಕ ದೇಸಾರರ ಬಾಂವಿಗೆ ಆಗಮಿಸಿ ಮುಕ್ತಾಯ ಗೊಂಡಿತು.
ಗಮನ ಸೆಳೆದ ಸಾಮೂಹಿಕ ರುದ್ರಾಭೀಷೇಕ : ದೇವಸ್ಥಾನಗಳಲ್ಲಿ ನೂರು, ಇನ್ನೂರು ರೂ.ಗಳನ್ನು ಕೊಟ್ಟರೇ ಸದ್ಭಕ್ತರ ಹೆಸರಿನಲ್ಲಿ ರುದ್ರಾಭಿಷೇಕ ಮಾಡುವುದನ್ನು ಕಾಣುತ್ತೇವೆ. ಆದರೆ ಹೊರಾಂಗಣದಲ್ಲಿ ಎಲ್ಲರಿಗೂ ಕಾಣುವಂತೆ ಮಂತ್ರೋಚ್ಛಾರ ಕೇಳುವಂತೆ ನಡೆಸಿಕೊಡುವ ಸಾಮೂಹಿಕ ಅಭಿಷೇಕ ಶತಶತಮಾನಗಳಿಂದಲೂ ಯಾವುದೇ ಅಡೆತಡೆಗಳಿಲ್ಲದೇ ಪ್ರತಿವರ್ಷ ನಡೆಯುವುದನ್ನು ನೋಡಬೇಕು!!
ತೇರದಾಳದಲ್ಲಿ ಪ್ರತಿವರ್ಷದಂತೆ ದೀಪಾವಳಿ ಕಡೇಪಾಡ್ಯೆಯಂದು ಸಂಜೆ ನಡೆಯುವ ಸಾಮೂಹಿಕ ರುದ್ರಾಭಿಷೇಕ ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇಸಾರರ ಬಾವಿಯಲ್ಲಿ ನೆರವೇರಿತು. ಶ್ರೀಅಲ್ಲಮಪ್ರಭುದೇವರ ದೇವಸ್ಥಾನದ ಎಲ್ಲ ಅರ್ಚಕರಿಂದ ಸಾಮೂಹಿಕ ರುದ್ರಾಭಿಷೇಕ, ಸಾಮೂಹಿಕ ಮಂತ್ರಪಠಣವು ಸೇರಿದ ಭಕ್ತಜನತೆಯಲ್ಲಿ ಭಕ್ತಿಭಾವ ಮೂಡಿಸಿತು. ಪಟ್ಟಣದ ನಾಡಗೌಡ ಕುಟುಂಬವರ್ಗದವರು ರುದ್ರಾಭಿಷೇಕ ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಸೇರಿದ ಸದ್ಭಕ್ತರು ವೀಕ್ಷಿಸಿದರು.
ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಬಗ್ಗೆ ಜನತೆ ಹೊಂದಿರುವ ಶೃದ್ಧಾ ಭಕ್ತಿಗೆ ಸಾಕ್ಷಿಯಾಗಿ ಬಾಳೆಹಣ್ಣು, ತುಪ್ಪ, ಹಾಲು, ಸಕ್ಕರೆ, ಜೇನುತುಪ್ಪವನ್ನು ದೇಸಾರರ ಬಾವಿ ಮೇಲೆ ಸದ್ಭಕ್ತರಿಂದ ಸಂಗ್ರಹಿಸಲಾಗುತ್ತದೆ. ಸಂಜೆ ಹೊತ್ತಿಗೆ ಉತ್ಸವ ಆಗಮಿಸಿದ ನಂತರ ಅರ್ಚಕರು ನಡೆಸಿಕೊಡುವ ಸಾಮೂಹಿಕ ರುದ್ರಾಭಿಷೇಕ, ಮಂತ್ರೋಚ್ಛಾರ ಸಹಸ್ರ-ಸಹಸ್ರ ಸಂಖ್ಯೆಯ ಜನರ ಗಮನ ಸೆಳೆಯುತ್ತದೆ. ಯಾವುದೇ ಬೇಧ-ಭಾವದಿಂದ ಎಲ್ಲರೂ ನೋಡುವ ಈ ರುದ್ರಾಭೀಷೇಕ ಈ ಭಾಗದಲ್ಲಿಯೇ ಪ್ರಸಿದ್ಧಿಯಾಗಿದೆ.
ಪ್ರತಿವರ್ಷದಂತೆ ಇಲ್ಲಿಯ ಸಮಸ್ಥ ಜನತೆ ದೀಪಾವಳಿ ಕಡೇಪಾಡ್ಯವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದರ್ಶನ ಪಡೆದರು. ರುದ್ರಾಭಿಷೇಕ ಹಾನಿಯಾಗದಂತೆ ದೊಡ್ಡದಾದ ತೆಪೇಲಿಗಳಲ್ಲಿ ಸಂಗ್ರಹಿಸಿ ಲಿಂಗದೇವರ ಕಟ್ಟೆಗೆ ದರ್ಶನಕ್ಕೆ ಬರುವ ಸದ್ಭಕ್ತರಿಗೆ ಯುವಕರು, ಹಿರಿಯರು ರಾತ್ರಿಯಿಡೀ ವಿತರಿಸಿದರು. ಸೋಮವಾರ ಬೆಳಗಿನಜಾವ ಮತ್ತೆ ಪಲ್ಲಕ್ಕಿ ಉತ್ಸವ ಆರಂಭಗೊಂಡು ಶ್ರೀಅಲ್ಲಮಪ್ರಭುದೇವರ ದೇವಸ್ಥಾನಕ್ಕೆ ಮರಳಿತು. ರವಿವಾರ ರಾತ್ರಿ ಶ್ರೀಪ್ರಭುಲಿಂಗೇಶ್ವರ ಭಜನಾ ಮಂಡಳಿಯವರು ಭಕ್ತಿಸಂಗೀತ ನಡೆಸಿಕೊಟ್ಟರು.